ಜಯದೇವಪ್ಪ ಹಾಲಪ್ಪ ಪಟೇಲ್ (೧ ಅಕ್ಟೋಬರ್ ೧೯೩೦ - ೧೨ ಡಿಸೆಂಬರ್ ೨೦೦೦) ಅವರು ಭಾರತದ ಕರ್ನಾಟಕ ರಾಜ್ಯದ ೯ ನೇ ಮುಖ್ಯಮಂತ್ರಿಯಾಗಿದ್ದರು. ಜೆ ಹೆಚ್ ಪಟೇಲ್ ಅವರು ೩೧ ಮೇ ೧೯೯೬ ರಿಂದ ೭ ಅಕ್ಟೋಬರ್ ೧೯೯೯ ರವರೆಗೆ ಮುಖ್ಯಮಂತ್ರಿಯಾಗಿದ್ದರು. == ಜೀವನಚರಿತ್ರೆ == ಜೆ.ಎಚ್. ಪಟೇಲ್ ಅವರು ೧೯೩೦ ರ ಅಕ್ಟೋಬರ್ ೧ ರಂದು ಭಾರತದ ಕರ್ನಾಟಕದ ದಾವಣಗೆರೆ ಜಿಲ್ಲೆಯ ಕಾರಿಗನೂರಿನಲ್ಲಿ ಜನಿಸಿದರು. ಅವರು ಕಾನೂನಿನಲ್ಲಿ ಪದವೀಧರರಾಗಿದ್ದರು. ಜೆ.ಎಚ್. ಪಟೇಲ್ ಅವರು ಸರ್ವಮಂಗಳ ಅವರನ್ನು ವಿವಾಹವಾದರು. ಜೆ.ಎಚ್. ಪಟೇಲ್ ಮತ್ತು ಸರ್ವಮಂಗಳ ಅವರಿಗೆ ತ್ರಿಶೂಲ್, ಸತೀಶ್ ಮತ್ತು ಮಹಿಮಾ ಎಂಬ ಮೂವರು ಪುತ್ರರು ಜನಿಸಿದರು. ಜೆ.ಎಚ್. ಪಟೇಲರು ೧೯೪೨ ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದರು. ಕಟ್ಟಾ ಸಮಾಜವಾದಿ ಮತ್ತು ರಾಮ್ ಮನೋಹರ ಲೋಹಿಯಾ ಅವರ ಕಟ್ಟಾ ಅನುಯಾಯಿಯಾಗಿದ್ದರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. == ರಾಜಕೀಯ ವೃತ್ತಿಜೀವನ == ಜೆ.ಎಚ್. ಪಟೇಲ್ ಅವರು ೧೯೬೭ ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೧೯೬೭ ರಲ್ಲಿ ಲೋಕಸಭೆಯಲ್ಲಿ ಕನ್ನಡದಲ್ಲಿ ತಮ್ಮ ಚರ್ಚೆಗಳನ್ನು ಮಂಡಿಸಿದ ಮೊದಲ ಕನ್ನಡಿಗ. ಜೆ.ಎಚ್. ಪಟೇಲ್ ಅವರು ೧೯೭೮ ರಲ್ಲಿ ಚನ್ನಗಿರಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದರು. ೧೯೮೩ ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾ ಪಕ್ಷ ಸರ್ಕಾರದಲ್ಲಿ ಕಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಪಟೇಲ್ ಅವರು ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವರಾಗಿ ಸಹ ಸೇವೆ ಸಲ್ಲಿಸಿದರು. ೧೯೯೬ ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳವು ಮತ್ತೆ ಅಧಿಕಾರಕ್ಕೆ ಬಂದಾಗ ಉಪಮುಖ್ಯಮಂತ್ರಿಯಾದರು. ಪಟೇಲರ ಸರ್ಕಾರದಲ್ಲಿ ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗಿದೆ. ಪಟೇಲ್ ೧೨ ಡಿಸೆಂಬರ್ ೨೦೦೦ ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಸ್ವಗ್ರಾಮವಾದ ಕಾರಿಗನೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಸಮಾಧಿ ಮಾಡಲಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==